ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಬದುಕುಳಿವಿಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ, ಶ್ರೀ ಸುನಿಲ್ ವರ್ಣೇಕರ್ ಭಾಗಿ

  ಟೌನ್‌ಶಿಪ್‌ ಯೋಜನೆ: ರೈತರ ಬದುಕುಳಿವಿಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ, ಶ್ರೀ ಸುನಿಲ್ ವರ್ಣೇಕರ್ ಭಾಗಿ.                   

ಅಭಿವೃದ್ಧಿ ಹೆಸರಲ್ಲಿ ರೈತರ ಮರಣಶಾಸನ 

ರಿಯಲ್ ಎಸ್ಟೇಟ್ ಮಾಫಿಯಾ ಮಾಡಲು ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಕಸಿಯುತ್ತಿದೆ. ಅಭಿವೃದ್ಧಿ ಹೆಸರಲ್ಲಿ ರೈತರ ಮರಣಶಾಸನ ಬರೆಯಲು ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಕನಸಿನ ಕೂಸು ಎಂಬ ಸಚಿವ ಎಚ್.ಸಿ.ಬಾಲಕೃಷ್ಣ ಅವರ ಹೇಳಿಕೆಗೆ ತಿರುಗೇಟು ನೀಡಿದ ನಿಖಿಲ್ ಕುಮಾರಸ್ವಾಮಿ, 2006 ರಲ್ಲಿ ಯೋಜನೆ ಪ್ರಸ್ತಾಪವಾದಾಗ ಕುಮಾರಸ್ವಾಮಿ ಅವರು ರೈತರೊಂದಿಗೆ ಮೂರು ಸಭೆ ನಡೆಸಿದರು. ರೈತ ಮಹಿಳೆಯೊಬ್ಬರು ವಿರೋಧಿಸಿದಾಗ 2007ರ ಆ.1 ರಂದು ವಿಧಾನಸಭೆಯಲ್ಲಿ ಯೋಜನೆ ಕೈಬಿಟ್ಟಿರುವುದಾಗಿ ಘೋಷಿಸಿದರು. ಅದರ ದಾಖಲೆ ಇಂದಿಗೂ ಇದೆ. ಆದ್ದರಿಂದ ಇದು ಕುಮಾರಸ್ವಾಮಿ ಅವರ ಕೂಸಲ್ಲ. ಹೀಗಾಗಿ ಒತ್ತಾಯಪೂರ್ವಕವಾಗಿ ರೈತರಿಂದ ಭೂಸ್ವಾಧೀನ ಮಾಡಿಕೊಳ್ಳುವುದನ್ನು ಕೈಬಿಡಬೇಕು ಎಂದು ನಿಖಿಲ್ ಆಗ್ರಹಿಸಿದರು.

ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ನಡೆದ ಪಕ್ಷದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 4 ಶಾಸಕರಿಗೆ ಆಶೀರ್ವಾದ ಮಾಡಿ ಸಚಿವ ಸ್ಥಾನ ನೀಡಿದ್ದಾರೆ. ಆದರೆ ಜನರ ಕಷ್ಟ ಕೇಳುವ ಕೆಲಸ ಸಚಿವರು ಮಾಡುತ್ತಿಲ್ಲ. ಈ ಯೋಜನೆ ರೂಪುಗೊಂಡಾಗ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗಿರಲಿಲ್ಲ. ಮುಖ್ಯಮಂತ್ರಿ ಕುರ್ಚಿ ನೋಡಿ ಹೊಟ್ಟೆಕಿಚ್ಚು ಪಡುವ ಜಾಯಮಾನ ನಮ್ಮದಲ್ಲ ಎಂದು ಹೇಳಿದರು.

ಉಪನಗರ ಯೋಜನೆ ಮಾಡಲೇಬೇಕೆಂದಿದ್ದರೆ ಕೆಐಎಡಿಬಿಯಲ್ಲಿ ಲಭ್ಯವಿರುವ ಬರಡು ಭೂಮಿಯನ್ನು ಬಳಸಿಕೊಳ್ಳಿ. ಅಲ್ಲಿ ಸ್ಮಾರ್ಟ್ ಸಿಟಿ ಮಾಡಲು ನಾವು ಸಿದ್ದ. ಆದರೆ ಸಣ್ಣ, ಅತಿ ಸಣ್ಣ ರೈತರ ಹೈನುಗಾರಿಕೆ, ಕೃಷಿ ಭೂಮಿ ಕಸಿಯಬೇಡಿ. 3 ಕೋಟಿ ರು.ವರೆಗೂ ಪರಿಹಾರ ಕೊಡುವುದಾಗಿ ಹೇಳುತ್ತಿದ್ದಾರೆ. ಆದರೆ ರೈತರ ಬದುಕು, ಜೀವನೋಪಾಯ ಹಾಳಾಗುತ್ತಿದೆ. ದಯವಿಟ್ಟು ಅವರನ್ನು ಬದುಕಲು ಬಿಡಿ ಎಂದು ಮನವಿ ಮಾಡಿದರು.

ಸರ್ಕಾರದ ದ್ವಂದ್ವ ನೀತಿ ಆರೋಪ: ನೀವು ಸಿಎಂ

ಆಗುವುದಕ್ಕೂ ಮುಂಚಿನಿಂದಲೂ ಅಂದರೆ ಕಳೆದ 526 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೂ ಅವರ ಅಹವಾಲನ್ನು ಕೇಳಿಲ್ಲ. ಒಕ್ಕಲುತನ ಮಾಡುವ ರೈತರ ರಕ್ಷಣೆಗಾಗಿ ನಮ್ಮ ಕುಟುಂಬ ಒತ್ತು ನೀಡಿ ಪ್ರತಿಭಟನೆಗೆ ಬೆಂಬಲ ನೀಡಿದೆ. ಕಾಂಗ್ರೆಸ್‌ನ ಸತ್ಯಶೋಧನಾ ಸಮಿತಿಯ 200 ಪುಟದ ವರದಿಯೇ ಟೌನ್‌ಶಿಪ್‌ಗೆ ವಿರೋಧ ವ್ಯಕ್ತಪಡಿಸಿದೆ.

ಆ ವರದಿಗೆ ಬೆಲೆಯೇ ಇಲ್ಲವೇ? ಮತ್ತೆ ಏಕೆ ಪರಿಶೀಲನಾ ಸಮಿತಿ ಬೇಕು ಎಂದು ಖಾರವಾಗಿ ಪ್ರಶ್ನಿಸಿದರು. ಜಿಬಿಎ ಪ್ರಾಧಿಕಾರ ರಚಿಸಿ 2025ರಲ್ಲಿ ಅಧಿಸೂಚನೆ ಹೊರಡಿಸಿದ್ದಾರೆ.

ದೇವೇಗೌಡರು ಬಿಡದಿ ಟೌನ್‌ಶಿಪ್ ವಿರೋಧಿಸಿ ಸತ್ಯಾಗ್ರಹ ಎಚ್ಚರಿಕೆ ನೀಡಿದ ಮರುದಿನ ಪರಿಶೀಲನಾ ಸಮಿತಿ ಮಾಡುವುದಾಗಿ ಹೇಳಿ, ಅದೇ ದಿನ ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ. ಇದು ಸರ್ಕಾರದ ದ್ವಂದ್ವ ನೀತಿಗೆ ಸಾಕ್ಷಿ ಎಂದು ಕಿಡಿಕಾರಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷನಿಖಿಲ್ ಕುಮಾರಸ್ವಾಮಿ ಬೆಳಗಾವಿಯ ಯುವ ಜ್ಯಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷರಾದ ಶ್ರೀ ಸುನಿಲ್ ವರ್ಣೇಕರ್, ಬೆಳಗಾವಿಯ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶ್ರೀ ಶಂಕರ್ ಮಾಡಲಗಿ ಉಪಸ್ಥಿತರಿದ್ದರು.


Comments

Popular posts from this blog

ಕನಸಿಗೆ ಬಡತನದ ತಡೆಯಿಲ್ಲ: ಕಠಿಣ ಪರಿಶ್ರಮದಿಂದ ವೈದ್ಯಕೀಯ ಸೀಟ್ ಪಡೆದ ವಿಜಯ್ ಕರಿಕಟ್ಟಿ

ಶ್ರೀ ಸುನೀಲ ವಣೇಕರ್ ಸಹಾಯ ಹಸ್ತ: ಬೈಲಹೊಂಗಲದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಕೋರ್ಸ್ ಜೊತೆಗೆ ಆಕರ್ಷಕ ಬಹುಮಾನಗಳು!